ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯುವುದು ಹಲವರ ಕನಸಾಗಿರುತ್ತದೆ. ಇದೀಗ ಅಂತಹ ಕನಸು ನನಸಾಗುವ ಸಮಯ ಬಂದಿದೆ . ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ ಉದ್ಯೋಗಾಂಕ್ಷಿಗಳಿಗೆ ಹುದ್ದೆಗಳ ಸಂಖ್ಯೆಯನ್ನು ಮೂರುಪಟ್ಟು ಹೆಚ್ಚಳ ಮಾಡಿ ರೈಲ್ವೆ ನೇಮಕಾತಿ ಮಂಡಳಿ ಸಿಹಿ ಸುದ್ದಿ ನೀಡಿದೆ. ಹುದ್ದೆಗಳ ಸಂಖ್ಯೆಯನ್ನು 14,843 ರಿಂದ 49,164 ಕ್ಕೆ ಏರಿಕೆ ಮಾಡಲಾಗಿದೆ. ಈ ಮೊದಲು 9,144 ಇದ್ದ ಆರ್ ಆರ್ ಬಿ ತಾಂತ್ರಿಕ ಹುದ್ದೆಗಳ ಸಂಖ್ಯೆಯನ್ನು 30,365ಕ್ಕೆ ಹೆಚ್ಚಿಸಲಾಗಿದೆ.
ಹುಬ್ಬಳ್ಳಿ ಕೇಂದ್ರವಾಗಿರುವ ನೈರುತ್ಯ ವಲಯದಲ್ಲಿ ಈ ಹಿಂದೆ 301 ತಂತ್ರಜ್ಞರ ಹುದ್ದೆಗಳು ಖಾಲಿ ಇವೆಯೆಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಹುದ್ದೆಗಳ ಸಂಖ್ಯೆಯನ್ನು 1023ಕ್ಕೆ ಏರಿಕೆ ಮಾಡಲಾಗಿದೆ. ದಕ್ಷಿಣ ರೈಲ್ವೆಯಲ್ಲಿ 1111 ಹುದ್ದೆಗಳ ಜಾಗದಲ್ಲಿ 4323 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.
5696 ಅಸಿಸ್ಟೆಂಟ್ ಲೋಕೊ ಪೈಲಟ್ ಹುದ್ದೆಗಳ ಭರ್ತಿಗಾಗಿ ಜನವರಿ 20 ರಂದು ಅರ್ಜಿ ಆಹ್ವಾನಿಸಲಾಗಿತ್ತು. ಫೆಬ್ರವರಿ 19 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿತ್ತು. ಇನ್ನಷ್ಟು ಹುದ್ದೆಗಳ ಬೇಡಿಕೆಯಲ್ಲಿ ಹೆಚ್ಚಳ ಬಂದ ಕಾರಣ ಇದೀಗ ಈ ಹುದ್ದೆಗಳ ಸಂಖ್ಯೆ 18799ಕ್ಕೆ ಏರಿಸಲಾಗಿದ್ದು , ಲಭ್ಯವಿರುವ ಹುದ್ದೆಗಳ ಸಂಖ್ಯೆಯನ್ನು ಪರಿಷ್ಕರಿಸಿ ಇಲಾಖಾ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು. ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಾಗಿರುವ ಕಾರಣ ಈಗಾಗಲೇ ಅರ್ಜಿ ಸಲ್ಲಿಸಿದ ಅಭರ್ಥಿಗಳಿಗೆ ಅರ್ಜಿ ಪರಿಷ್ಕರಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಆರ್.ಆರ್.ಬಿ. ತಿಳಿಸಿದೆ.