2024-25ನೇ ಶೈಕ್ಷಣಿಕ ಸಾಲಿನ ಅರೆ ವೈದ್ಯಕೀಯ ಡಿಪ್ಲೋಮಾ ಕೋರ್ಸ್ ಗಳಿಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ, ಹಾಗೂ ಇತರೆ ಸರ್ಕಾರಿ ಆಸ್ಪತ್ರೆಗಳು ಹಾಗೂ ರಾಜ್ಯದಲ್ಲಿನ ವಿವಿಧ ಖಾಸಗಿ ಪ್ಯಾರಾ ಮೆಡಿಕಲ್ ಸಂಸ್ಥೆಗಳಲ್ಲಿನ ಸರಕಾರಿ ಕೋಟಾದ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಲ್.ಎಲ್.ಸಿ / ಪಿಯುಸಿ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿದಾರರು 1ನೇ ತರಗತಿಯಿಂದ ಎಸ್.ಎಲ್.ಎಲ್.ಸಿ/ಪಿಯುಸಿಯ ವರೆಗೆ ಕನಿಷ್ಠ 7 ವರ್ಷಗಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಕೋರ್ಸಿನ ಅವಧಿ ಪಿಯುಸಿ ಅಭ್ಯರ್ಥಿಗಳಿಗೆ 2 ವರ್ಷ ಮತ್ತು 3 ತಿಂಗಳು ಇಂಟರ್ನ್ ಷಿಪ್ ಹಾಗೂ ಎಸ್.ಎಸ್.ಎಲ್.ಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು 3 ತಿಂಗಳು ಇಂಟರ್ನ್ ಷಿಪ್ ಇರುತ್ತದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳು ಹಾಗೂ ಪ.ಜಾತಿ/ಪ.ಪಂಗಡ ಹಾಗೂ ಸೇವಾನಿರತ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅರ್ಜಿ ನಮೂನೆಗಳು ಇಲಾಖೆಯ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದ್ದು ಆನ್ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ. ಅರ್ಜಿಯ ಜೊತೆ ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 400/- ರೂ. ಹಾಗೂ ಪ.ಜಾತಿ/ಪ.ಪಂ/ಪ್ರವರ್ಗ 1 ರ ಅಭ್ಯರ್ಥಿಗಳು 250/- ರೂ. ಶುಲ್ಕವನ್ನು ಕ್ರೆಡಿಟ್/ಡೆಬಿಟ್/ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಪಾವತಿಸುವುದು. 13.06.2024 ರಿಂದ 12.07.2024ರವರೆಗೆ ಮಂಡಳಿಯ ಜಾಲತಾಣದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಅಭ್ಯರ್ಥಿಗಳನ್ನು ಅವರ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಹಾಗೂ ಪ್ರವರ್ಗದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಮೂಲ ದಾಖಲೆಗಳನ್ನು ಕೌನ್ಸಿಲಿಂಗ್ ಗೆ ಹಾಜರಾಗುವ ಸಮಯದಲ್ಲಿ ಸಲ್ಲಿಸುವುದು. ಕೌನ್ಸಿಲಿಂಗ್ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.